ಚಿಂಚಲಿ ಮಾಯಮ್ಮ ದೇವಿಯ ಭಂಡಾರ
ಶಕ್ತಿದೇವತೆ ಚಿಂಚಲಿಯ ಶ್ರೀ ಮಾಯಕ್ಕ ದೇವಿ
ಚಂಚಲಿ ಶ್ರೀ ಮಾಯಕ್ಕಾದೇವಿಯ ವಿಹಂಗಮ ನೋಟ
ನಮ್ಮ ನಾಡು ಅನೇಕ ವೈವಿಧ್ಯಮಯ ದೇವಾಲಯಗಳ ದಿವ್ಯ ತಾಣ.ಇಲ್ಲಿನ ಒಂದೊಂದು ದೇವಾಲಯದ ಶಕ್ತಿ ದೇವತೆಗಳಿಗೆ ತನ್ನದೇ ಆದ ಇತಿಹಾಸವಿದೆ. ದಕ್ಷಿಣದಲ್ಲಿ ಚಾಮುಂಡಿ ದೇವಿ ಪೂರ್ವದಲ್ಲಿ ಬನಶಂಕರಿದೇವಿ, ಹುಲಿಗೆಮ್ಮ, ಪ್ರಸಿದ್ಧಿ ಪಡೆದರೆ ಉತ್ತರದಲ್ಲಿ ಎಲ್ಲಮ್ಮೆ ಮಾರಿಕಾಂಬಾ, ಹಾಗೂ ಮಾಯಕ್ಕದೇವಿ ಗ್ರಾಮದೇವತೆಗಳು ವಿಶಿಷ್ಟವಾಗಿ ಭಕ್ತರ ಮನದಲ್ಲಿ ನೆಲೆಯೂರಿದ್ದಾರೆ. ಹಾಗೂ ಪ್ರಮುಖ ಶ್ರದ್ದೆಯ ತಾಣಗಳಾಗಿವೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಶ್ರೀ ವಾಯಕ್ಕದೇವಿ ಇಂದಿಗೂ ಜನ ಮನ ಮಂಟಪದಲ್ಲಿ ಅನನ್ಯ ಪ್ರಭಾವ ಉಳಿಸಿಕೊಂಡು ಬಂದಿದ್ದಾಳೆ. ಈ ಶಕ್ತಿ ದೇವತೆಯನ್ನು ಮಹಾಕಾಳಿ, ಮಾಯಕಾರತಿ, ಮಾಯವ್ವ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
*ಹಿನ್ನೆಲೆ: - ಕ್ರಿ.ಶ.1881 ರ ದಾಖಲೆಗಳ ಪ್ರಕಾರ ಮಾಯಕ್ಕದೇವಿಯ ಮೂಲ ಸ್ಥಳ ಮಹಾರಾಷ್ಟ್ರದ ಮಾನದೇಶ ಕೊಂಕಣ ಮಾಯಕ್ಕೆ ಮಾನದೇಶದಿಂದ ಕೀಲ, ಕಟ್ಟಿ ಎಂಬ ಇಬ್ಬರು ರಾಕ್ಷಸರನ್ನು ಬೆನ್ನಟ್ಟಿಕೊಂಡು ಚಿಂಚಲಿಗೆ ಬಂದು ಸಂಹಾರ ಮಾಡಿದಳೆಂಬ ಐತಿಹ್ಯವಿದೆ, ರಾಕ್ಷಸರ ಸಂಹಾರದ ನಂತರ ಮಾಯಕ್ಕ ಇಲ್ಲಿಯೇ ನೆಲೆಯೂರಿ ನಿಂತಳೆಂದು ದಾಖಲೆಗಳಿಂದ ತಿಳಿದು ಬರುತ್ತದೆ.
ದೇವಿ ನೆಲೆ ನಿಂತದ್ದನ್ನು ಕುರಿತಂತೆ ಒಂದು ಐತಿಹ್ಯವಿದೆ. ದೇವಿ ಚಿಂಚಲಿಯಲ್ಲಿ ಕ್ಯಾರಿಪೊಪ್ಪ ಎಡಿ ಮಾಯಮ್ಮ, ಕರಗುತ್ತಿ, ಬಂಗಾರ ಗಿಡ ಮೊದಲಾದ ಕಡೆ ಅಲೆದು ಕೊನೆಗೆ ಇಲ್ಲಿಯ ದೊಡ್ಡ ಹಾಳು ಮಣ್ಣಿನ ದಿಣ್ಣೆ ಇರುವ ಸ್ಥಳದಲ್ಲಿರುವ ಹಿರಿದೇವಿ ಗುಡಿಗೆ ಬಂದು ತನಗೆ ಆಶ್ರಯ ನೀಡುವಂತೆ ಹಿರಿದೇವಿಯನ್ನು ಕೇಳಿಕೊಳ್ಳುತ್ತಾಳೆ, ಹಿರಿದೇವಿ ಭಕ್ತರಿಂದ ಮೊದಲ ಮಾನ ನನಗೆ ಸಿಗಬೇಕು. ಭಕ್ತರ ಮೊದಲ ದರ್ಶನ ನನ್ನದೇ ಆಗಬೇಕು ಎಂಬ ಕರಾರುಗಳೊಂದಿಗೆ ಮಾಯಕ್ಕಳಗೆ ಆಶ್ರಯ ನೀಡಿದಳಂತೆ, ಇಂದಿಗೂ ಚಿಂಚಲಿಯಲ್ಲಿ ಮೊದಲು. ಹಿರಿ ದೇವಿಯ ದರ್ಶನ ಪಡೆದು ನೈವೇದ್ಯ ಸಲ್ಲಿಸಿದ ನಂತರವೇ ಮಾಯಕ್ಕನಿಗೆ ಪೂಜೆ ಸಲ್ಲಿಸುವ ವಾಡಿಕೆ ಇದೆ.
ಹಾಲಹಳ್ಳ: ಮಾಯಕ್ಕ ಒಂದು ದಿನ ಹೊರವಲಯದ ಹಳ್ಳದ ಹತ್ತಿರ ಹೋಗ, ಅಲ್ಲಿ ಕುರಿ ಕಾಯುತಿದ್ದವನ ಬಳಿ ಸ್ವಲ್ಪ ಹಾಲು ಬೇಕೆಂದು ಕೆಲಿಕೊಂಡಳಂತೆ. ಆತ ನಿರಾಕರಿಸಿದಾಗ ಮಾಯಕ್ಕ ತನ್ನ ಶಕ್ತಿಯಿಂದ ಹಳ್ಳವೆಲ್ಲವೂ ಹಾಲಾಗಿ ಹರಿಯಲಿ ಎಂದಳಂತೆ ! ಆಗ ಹಳ್ಳವೆಲ್ಲ ಹಾಲಾಗಿ ತುಂಬಿ ಹರಿಯಿತಂಬ ಐತಿಹ್ಯವಿದೆ, ಅದಕ್ಕಾಗಿ ಇಂದಿಗೂ ದೇವಿಯ ಲಕ್ಷಾಂತರ ಭಕ್ತರು ಈ ಹಾಲಹಳ್ಳದಲ್ಲಿ ಪವಿತ್ರ ಸ್ನಾನ ಮಾಡಿ ಪೂಜೆ ಮಾಡುವುದುಂಟು. ಇದೇ ಹಾಲಹಳ್ಳದ ಪಕ್ಕದಲ್ಲಿ ಕುರಿ ಕಾಯುತ್ತಿದ್ದವನ ಬಳಿ ಕುರಿಯ ಉಣ್ಣೆ ಕೊಡುವಂತೆ ಕೇಳಿದಾಗ ಅವರು ನಿರಾಕರಿಸುತ್ತಾರೆ, ಆಗ ಸಿಟ್ಟಿನಿಂದ ದೇವಿ ಕುರಿಗಳೆಲ್ಲವೂ ಕಲ್ಲಾಗಲಿ, ಎಂದು ತಪಿಸಿದಳಂತೆ. ಹೀಗಾಗಿ ಕುರಿಗಳೆಲ್ಲ ಕಲ್ಲಾಗಿ ಬಿದ್ದವು. ಇಂದಿಗೂ ಪಾಲಹಳದ ದಡದಲ್ಲಿ ಗುಂಪಾಗಿ ಬಿದ್ದಿರುವ ಕಲ್ಲುಗಳನ್ನು ಉಣ್ಣೆ ಮುತ್ತಪ್ಪನ ಕಲ್ಲು ಎಂದು ಕರೆಯುವುದು ಉಂಟು.
* ಮಾಯಕ್ಕನ ಕುದುರೆ – * ದೇವಿಯ ಮುಖ್ಯವಾಹನ ಕುದುರೆ, ಅವಳ ವಿಗ್ರಹಗಳು ಪಲ್ಲಕ್ಕಿ ಉತ್ಸವ ಮೂರ್ತಿಗಳು ಅಶ್ವಾರೂಢವಾಗಿರುವುದು ವಿಶೇಷ, ಪ್ರಸ್ತುತ ಮಾಯಕ್ಕ ದೇವಿಯ ಕುದುರೆಯ ಮೂರ್ತಿ ಇದ್ದು, ಭಕ್ತರು ಅದರ ಹಣೆಯ ಮೇಲೆ ಬಂಡಾರ ಲೇಪಿಸಿ ತಮ್ಮ ಹಣೆಗೂ ಭಂಡಾರ ಲೇಪಿಸಿಕೊಳ್ಳುವುದು ವಾಡಿಕೆ.
1988 ರಲ್ಲಿ ದೇವಸ್ಥಾನದ ಟ್ರಸ್ಟ್ ಸಮಿತಿ ರಚನೆಯಾಗಿದ್ದು, ದೇಗುಲದ ಅಭಿವೃದ್ಧಿ ಕೆಲಸಗಳು ನಿರಂತರ ನಡೆಯುತ್ತಿವೆ. ದೇವಿಯ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ವಸತಿ ಕಲ್ಪಿಸುವ ದೃಷ್ಟಿಯಿಂದ ಮೂರು ಅಂತಸ್ತಿನ ಕಟ್ಟಡವುಳ್ಳ ಧರ್ಮಶಾಲೆಯಲ್ಲಿ ಸುಸಜ್ಜಿತ 110 ಕೊಠಡಿಗಳಿವೆ. ಈ ದೇವಸ್ಥಾನದಲ್ಲಿ ನಿರಂತರ ಅನ್ನದಾಸೋಹ ನಡೆಯುತ್ತದೆ,
ಜಾತ್ರೆಯ ಐತಿಹಾಸಿಕ ಸೊಬಗು: – ಚಂಚಲಿಯ ಈ ಸುಪ್ರಸಿದ್ದ ಮಾಯಕ್ಕ ದೇವಿಯ ಜಾತ್ರೆಗೆ ಬರುವವರು ಕರ್ನಾಟಕಕ್ಕಿಂತ ಮಹಾರಾಷ್ಟ್ರದ ಭಕ್ತರೇ ಹೆಚ್ಚು ಎಂಬುದು ಗಮನಾರ್ಹ. ಭಾರತ ಹುಣ್ಣಿಮೆಯಿಂದ ಶಿವರಾತ್ರಿ ಅಮಾವಾಸ್ಯೆಯವರೆಗೆ ಸುಮಾರು 15 - 20 ದಿನಗಳ ವರೆಗೆ ಮಾಯಕ್ಕ ದೇವಿಯ ವೈಭವದ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಗುಡಿಯ ಸುತ್ತ ಸುಮಾರು ಆರೇಳು ಕಿಮೀ, ಪ್ರದೇಶವು ಲಕ್ಷಾಂತರ ಭಕ್ತ ಸಮೂಹದಿಂದ ಗಿಜುಗುಡುತ್ತಿರುತ್ತದೆ.
ಮಾಯಕ್ಕದೇವಿಯ ಸನ್ನಿಧಾನದಲ್ಲಿ ನವರಾತ್ರಿಯಲ್ಲಿ ಅತ್ಯಂತ ಜೋರಾಗಿ ಪೂಜೆ ನಡೆಯುತ್ತದೆ. ದಸರಾದ ಮೊದಲ ದಿನ ಇಲ್ಲಿ ಘಟಸ್ಥಾಪನೆ ಮಾಡಲಾಗುತ್ತದೆ. ಇದಾದ ನಂತರ ನವರಾತ್ರಿಯ ಒಂಬತ್ತು ದಿನಗಳು ದೇವಿಗೆ ಬೆಳಗ್ಗೆ ಹಾಗೂ ಸಂಜೆ ಅಭಿಷೇಕ, ಅಲಂಕಾರ ಪೂಜೆ ಪುನಸ್ಕಾರಗಳು ನೆರವೇರುತ್ತವೆ. ಮಾಯಕ್ಕದೇವಿ ಕುದುರೆ, ನವಿಲು, ಸಿಂಹ, ಆನೆ ಹೀಗೆ ನವರಾತ್ರಿಯ ಒಂಬತ್ತು ದಿನಗಳಂದು ಒಂಬತ್ತು ವಾಹನಗಳನ್ನು ರಾಕ್ಷಸರನ್ನು ಸಂಹರಿಸುವ ಆಕಾರದಲ್ಲಿ ಕಂಗೊಳಿಸುತ್ತಾಳೆ. 9 ಅಲಂಕಾರಗಳಲ್ಲಿ ದೇವಿಯ ರೂಪ ವರ್ಣಿಸಲು ಅಸಾಧ್ಯ. ಚಿಂಚಲಿ ಮಾಯಕ್ಕಾ ದೇವಿ ಭಕ್ತರ ಪಾಲಿನ ಕಾಮಧೇನು. ಇವಳ ಬಳಿ ಭಕ್ತಿಯಿಂದ ಏನೇ ಬೇಡಿದರು ಈಡೇರುತ್ತದೆ. ಹೀಗಾಗಿ ಹರಕೆ ಈಡೇರಿದ ಭಕ್ತರು ನವರಾತ್ರಿಯ ವೇಳೆ ಇಲ್ಲಿ ಬಂದು ದೀಪ ಹಚ್ಚುವ ಮೂಲಕ ತಮ್ಮ ಹರಕೆಯನ್ನು ತೀರಿಸುತ್ತಾರೆ.ನವರಾತ್ರಿಯಲ್ಲಿ ಸಾಕ್ಷಾತ್ ಮಹಾಕಾಳಿ ಸ್ವರೂಪಿಣಿಯಾದ ಮಾಯಕ್ಕದೇವಿಯ ದರ್ಶನ ಮಾಡುವುದು ಅತ್ಯಂತ ಪುಣ್ಯಪ್ರದ. ಹೀಗಾಗಿ ಈ ದೇವಿಯ ದರ್ಶನಕ್ಕಾಗಿ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಸೇರಿದಂತೆ ಹಲವು ಭಾಗಗಳಿಂದ ಜನಸಾಗರವೇ ಹರಿದು ಬರುತ್ತದೆ.
Location Raybag
https://maps.app.goo.gl/RwsBg11MkqFvQXX1A
Post a Comment